June 12, 2026

ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಗಲಾದ ಕರವೇ ಸ್ವಾಭಿಮಾನಿ ಬಣ ಉಚಿತ ಪುಸ್ತಕ ವಿತರಿಸಿ ದಾನಿಗಳಿಗೆ ಸನ್ಮಾನ

ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವ ಹಾಗೂ ಅಲ್ಲಿನ ಮೂಲಸೌಕರ್ಯಗಳನ್ನು ಉತ್ತಮಪಡಿಸುವ ಪವಿತ್ರ ಕರ್ತವ್ಯ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ್ ಗೌಡ ಪ್ರತಿಪಾದಿಸಿದರು.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯ ನಂದಿಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಶಾಲಾ ಮಕ್ಕಳ ಸುಮಧುರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಶೇಖರ್ ಗೌಡ, ನಮ್ಮ ಸಂಘಟನೆಯ ವತಿಯಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಅಗತ್ಯವಿರುವ ಶೈಕ್ಷಣಿಕ ಸಾಮಗ್ರಿಗಳನ್ನು ತಲುಪಿಸುತ್ತಿರುವುದು ಹೆಮ್ಮೆಯ ವಿಚಾರ. ಶಾಲಾ ಆವರಣವನ್ನು ಅತ್ಯಂತ ಸ್ವಚ್ಛವಾಗಿ, ಶಿಸ್ತುಬದ್ಧವಾಗಿ ಮತ್ತು ಆಕರ್ಷಕವಾಗಿ ಇಟ್ಟುಕೊಂಡಿರುವ ಇಲ್ಲಿನ ಶಿಕ್ಷಕರ ಸೇವೆ ಅನನ್ಯವಾದುದು,” ಎಂದು ಶಿಕ್ಷಕ ವೃಂದಕ್ಕೆ ಮುಕ್ತ ಕಂಠದಿಂದ ಕೃತಜ್ಞತೆ ಸಲ್ಲಿಸಿದರು.
ಲೇಖನ ಸಾಮಗ್ರಿಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕರವೇ ಕುಶಾಲನಗರ ತಾಲೂಕು ಅಧ್ಯಕ್ಷ ಶಿವಣ್ಣ, “ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೂ ಸಹ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ವಿದ್ಯಾರ್ಥಿಗಳು ಯಾವುದೇ ಖಾಸಗಿ ಶಾಲೆಗೆ ಕಮ್ಮಿಯಿಲ್ಲದಂತೆ ಶ್ರದ್ಧೆಯಿಂದ ಓದಿ, ಹೆತ್ತವರಿಗೆ ಹಾಗೂ ಶಾಲೆಗೆ ಕೀರ್ತಿ ತರಬೇಕು,” ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಇದೇ ಸಂದರ್ಭದಲ್ಲಿ ನಂದಿಗುಂದ ಶಾಲಾ ವಿದ್ಯಾರ್ಥಿಗಳಿಗೆ ಸ್ವಂತ ಖರ್ಚಿನಲ್ಲಿ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಉದಾರಿ ದಾನಿಗಳಾದ ನಳಿನಿ ರಾಜಶೇಖರ್ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಶಾಲು ಹೊದಿಸಿ ಮತ್ತು ನೆನಪಿನ ಕಾಣಿಕೆ ನೀಡಿ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು ಮತ್ತು ಮಕ್ಕಳಿಗೆ ಸಿಹಂಚಲಾಯಿತು

ಈ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಕರವೇ ಸ್ವಾಭಿಮಾನಿ ಬಣದ ಕೊಡಗು ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ, ಜಿಲ್ಲಾ ಗೌರವಾಧ್ಯಕ್ಷ ಚಂದ್ರು, ಮಹಿಳಾ ಜಿಲ್ಲಾ ಅಧ್ಯಕ್ಷೆ ಜಯಶ್ರೀ ಮುರುಗೇಶ್ ಹಾಗೂ ಜಿಲ್ಲಾ ಸಲಹೆಗಾರ ಸಜಿಲ್ ಕುಮಾರ್ ಮತ್ತು ಕರವೇ ಕಾರ್ಮಿಕ ಘಟಕದ ಉಪಾಧ್ಯಕ್ಷ ಮಣಿಕಂಠ, ಮತ್ತು ನೆಲ್ಲಿಹುದಿಕೇರಿ ಘಟಕದ ಮತ್ತು ಅಧ್ಯಕ್ಷ ಹರೀಶ್,ಮತ್ತು ಕಾರ್ಯದರ್ಶಿ ನಂದ, ಮತ್ತು ಸಂಘಟನೆಯ ಪ್ರಮುಖ ಕಾರ್ಯಕರ್ತರಾದ ಬಾಲಕೃಷ್ಣ, ನಂಜಪ್ಪ, ರಮೇಶ್ ಹಾಗೂ ಕಾರ್ತಿಕ್ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರಾದ ವಸಂತಿ ಮತ್ತು ಸಹ ಶಿಕ್ಷಕರಾದ ಸಂಧ್ಯಾ ಭಾಗವಹಿಸಿದ್ದರು